ಈಗಂತೂ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರೋದು ಹಾಗೂ ಕೆಲವೊಂದು ಸರ್ಕಾರಿ ಶಾಲೆಗಳು ಮುಚ್ಚಲು ಪೂರ್ವ ಪ್ರಾಥಮಿಕ ಶಿಕ್ಷಣ ಅಂದ್ರೆ ಎಲ್-ಕೆಜಿ, ಯುಕೆಜಿ ಇಲ್ಲದಿರುವುದೇ ಕಾರಣ ಆಗಿದೆ ಅಂದ್ರೆ ತಪ್ಪಾಗೋದಿಲ್ಲ. ಹೌದು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದರೆ ಐದುವರೆ ವರ್ಷ ಪೂರೈಸಿರಬೇಕು, ಅದೂ ಕೂಡ ಒಂದನೇ ತರಗತಿಗೆ ಮಾತ್ರ ಸೇರಿಸಲು ಅವಕಾಶ ಇದೆ, ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಇರುವುದಿಲ್ಲ. ಇನ್ನು ಮುಖ್ಯವಾಗಿ ಮಕ್ಕಳಿಗೆ ಶಾಲೆಗೆ ಸೇರಿಸುವ ಮೊದಲು ಪ್ರಿ-ಕೆಜಿ, ಎಲ್-ಕೆಜಿ, ಯುಕೆಜಿ ಎಂದೆಲ್ಲ ಪೋಷಕರು ಹುಡುಕಾಡುವಾಗಲೆ ಖಾಸಗಿ ಶಾಲೆಗಳು ಪೋಷಕರಿಗೆ ಬಣ್ಣ ಬಣ್ಣದ ಚಿತ್ರವಿರುವ ಗೋಡೆಗಳನ್ನು ತೋರಿಸಿ ತಮ್ಮತ್ತ ಸೆಳೆಯುತ್ತಾರೆ. ಹೀಗಿರುವಾಗ ಒಮ್ಮೆ ಆ ಕಡೆ ಮುಖ ಮಾಡಿದವರು ಸರ್ಕಾರಿ ಶಾಲೆಗಳತ್ತ ತಿರುಗಿಯು ನೋಡುವುದಿಲ್ಲ.
ಈ ಮಧ್ಯೆ 4-5 ನೇ ವರ್ಷದ ಮಕ್ಕಳಿಗಾಗಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರಿಂದಲೂ ಈಗ ಬೇಡಿಕೆ ಹೆಚ್ಚಾಗಿದೆ. ಅಲ್ದೇ ಅಂಗನವಾಡಿಗಳು ಎಲ್ಲ ಗ್ರಾಮಗಳಲ್ಲಿದ್ದರೂ ಅವು ಶಿಕ್ಷಣ ನೀಡುತ್ತಿಲ್ಲ. ಬದಲಾಗಿ ಮಕ್ಕಳನ್ನು ನೋಡಿಕೊಳ್ಳುವ ಕೇಂದ್ರಗಳಾಗಿವೆ ಎಂದು ಪೋಷಕರು ವಾದಿಸುತ್ತಿದ್ದಾರೆ. ಈ ಕಾರಣಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಹೌದು ಅರ್ಹ ಶಾಲೆಗಳಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸಲು 2024-25ನೇ ಶೈಕ್ಷಣಿಕ ಸಾಲಿನ ಆರಂಭಿಕ ದಿನಾಂಕವಾದ ಮೇ 29ರ ಒಳಗಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಅಂತ ಇಲಾಖೆ ಸೂಚನೆ ಕೊಟ್ಟಿತ್ತು. ಇನ್ನು ಪ್ರಾಥಮಿಕ ಶಾಲೆಗಳಲ್ಲಿ ಇಸಿಸಿಇ ಅಂದ್ರೆ ದ್ವಿಭಾಷಾ ಹಾಗೂ ಎನ್ಎಸ್‌ಕ್ಯೂಎಫ್ ತರಗತಿಗಳನ್ನು ಪ್ರಾರಂಭಿಸಲು ಅರ್ಹತೆ ಹೊಂದಿರುತ್ತವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ ಸರ್ಕಾರವು ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿಯ ಹಾಗೂ ದ್ವಿಭಾಷಾ ಅಂದ್ರೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಮುಂದಾಗಿದ್ದು, ಈ ನಿಲುವು ಪಾಲಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ ಹಾಗೂ ಯುಕೆಜಿಯ ತರಗತಿಗಳು ಹಾಗೂ 31 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಆರಂಭಗೊಳ್ಳುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿದರೆ ಗುಣಮಟ್ಟ ಶಿಕ್ಷಣ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುಡು ಶಿಕ್ಷಣ ಇಲಾಖೆಯ ಅಭಿಪ್ರಾಯ.
ಅಕ್ಷರ ಆವಿಷ್ಕಾರ ಯೋಜನೆಯಡಿ ಸಿಕ್ಕಿದೆ ಗ್ರೀನ್ ಸಿಗ್ನಲ್
ಹೌದು ಯಾವ ಖಾಸಗಿ ಶಾಲೆಗಳಿಗಿಂತಲೂ ಗುಣಮಟ್ಟದಲ್ಲಿ ಕಡಿಮೆ ಇರಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನ ಆರಂಭಿಸಿದ್ದು, ಯೋಜನೆಯಡಿಯಲ್ಲಿ ಆರಂಭ ಮಾಡಲಾಗುತ್ತಿರುವ ತರಗತಿಗಳಲ್ಲಿ ಖಾಸಗಿ ಶಾಲೆಗಿಂತಲೂ ವಿಭಿನ್ನವಾಗಿ ಶಿಕ್ಷಣ ದೊರೆಯಲಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲು ಮಾಡುವುದರಿಂದ ಸಾವಿರಾರು ರುಪಾಯಿಗಳ ಶುಲ್ಕವನ್ನು ಉಳಿಸಬಹುದು ಹಾಗೂ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಶುಲ್ಕರಹಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುತ್ತದೆ. ತರಗತಿಗಳನ್ನು ಆರಂಭಿಸುವ ಶಾಲೆಗಳಿಗೆ ಅತಿಥಿ ಶಿಕ್ಷಕರು, ಒಬ್ಬ ಸಹಾಯಕಿ ಅಂದ್ರೆ ಆಯಾ ಇರುತ್ತಾರೆ.
ಇನ್ನು ಇಸಿಸಿಇ ತರಗತಿಗಳನ್ನು ಪ್ರಾರಂಭಿಸಲು ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಅಜೀಂ ಪ್ರೇಮಜಿ ಫೌಂಡೇಶನ್ ಹಾಗೂ ರಾಕೆಟ್ ಲರ್ನಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಡಯಟ್ ಪ್ರಾಂಶುಪಾಲರ ಮೇಲುಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತೆ. ಇನ್ನು ಎಲ್‌ಕೆಜಿ, ಯುಕೆಜಿಯ ತರಗತಿ ಪ್ರಾರಂಭಿಸಲು ಕೊಠಡಿ ವ್ಯವಸ್ಥೆ ಸಮೇತ ಬಾಲ ವೈಶಿಷ್ಟ್ಯಗಳು, ತರಗತಿ ಕೊಠಡಿ ಗೋಡೆ ಬರಹ, ಮಕ್ಕಳಿಗೆ ಆಕರ್ಷಣೀಯ ಕಾರ್ಟೂನ್ ಪಾತ್ರಗಳು, ಬಣ್ಣಗಳು, ಪ್ರಾಣಿಗಳು, ತರಕಾರಿ-ಹಣ್ಣುಗಳು, ಮಗು ಸ್ನೇಹಿ ಪೀಠೋಪಕರಣಗಳು, ಆಟ ಮತ್ತು ಕಲಿಯುವ ಮೂಲೆಗಳು, ಅಲ್ದೇ ಪೂರ್ವ ಸಂಖ್ಯಾಜ್ಞಾನ ಆಟಿಕೆಗಳು, ಬಿಲ್ಡಿಂಗ್ ಬ್ಲಾಕ್ಸ್, ಪಜಲ್ಸ್, ಪುಸ್ತಕಗಳು, ಕಾರ್ಡುಗಳು, ಹೊರಾಂಗಣ ಆಟದ ಪರಿಕರಗಳು, ಮರಳುಗುಂಡಿ ಇನ್ನಿತರ ಅಗತ್ಯ ಸೌಕರ್ಯಗಳನ್ನ ಕಲ್ಪಿಸಲಾಗಿದ್ಯಂತೆ.
ಇನ್ನು ಮಕ್ಕಳ ವೈಯಕ್ತಿಕ ಬೆಳವಣಿಗೆಯಲ್ಲಿ ಎರಡೂವರೆ ವರ್ಷದಿಂದ ಆರು ವರ್ಷ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಶಿಕ್ಷಕರು ಅರ್ಹ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಪಡೆದಿದ್ದರೆ ಮಾತ್ರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲೆಗಳು ಆರಂಭವಾಗಿವೆ. ದಾಖಲಾತಿಯನ್ನು ಆರಂಭಿಸಲು ಪ್ರಚಾರ ಮಾಡಬೇಕಾಗಿರುತ್ತದೆ. ಆದಷ್ಟೂ ತ್ವರಿತವಾಗಿ ಶಾಲೆಗಳನ್ನು ಆರಂಭಿಸಬೇಕು ಎಂದು ಶಿಕ್ಷಕರೂ ಹೇಳುತ್ತಾರೆ. ಅದಕ್ಕಾಗಿಯೇ ಸರಕಾರಿ ಪ್ರಾಥಮಿಕ ಶಾಲೆಗಳಲ್ಲೇ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡಲು ಆರಂಭಿಸಿದರೆ ದಾಖಲಾತಿ ಸಹಜವಾಗಿಯೇ ಹೆಚ್ಚಳವಾಗುತ್ತದೆ. ಹೀಗಾಗಿ ರಾಜ್ಯಾದ್ಯಂತ ಇರುವ ಆಯ್ದ 1004 ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಯುಕೆಜಿ ಆರಂಭ ಮಾಡಲಾಗುತ್ತಿದ್ದೂ, ಎಲ್ಲ ಶಾಲೆಗಳಯಲ್ಲಿಯೂ ಒಬ್ಬೊಬ್ಬ ಅತಿಥಿ ಶಿಕ್ಷಕರು ಹಾಗೂ ಆಯಾ ನೇಮಕಾತಿಗೆ ಸರ್ಕಾರ ಇನ್ನೇನು ಅಧಿಸೂಚನೆ ಹೊರಡಿಸಳಿದ್ದು, ನೇಮಕ ಆದವರಿಗೆ ವಿಶೇಷ ತರಭೇತಿಯನ್ನ ನೀಡಿ ಸಜ್ಜುಗೊಳಿಸಾಗುತ್ತಂತೆ.
ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಲ್ಲಿ ಸಿಗುತ್ತೆ ಉಚಿತ ವಿದ್ಯುತ್; 300ಯೂನಿಟ್ ಗಳವರೆಗೆ ಸಿಗಲಿದೆ ವಿದ್ಯುತ್
ಇದನ್ನೂ ಓದಿ: ನಿಮ್ಮ FD ಗೆ ಭರ್ಜರಿ ಬಡ್ಡಿ! ಅದ್ಭುತ ಬಡ್ಡಿ ದರಗಳನ್ನು ನೀಡುವ ಕೆಲವು ಬ್ಯಾಂಕುಗಳು ಇಲ್ಲಿವೆ!